ಪೀಕಾಕ್, ತಾಮಸ್ ಲವ್
1785-1866. ಕಾದಂಬರಿಕಾರ. ಹುಟ್ಟಿದ್ದು ವೇಮಕ್‍ನಲ್ಲಿ (18-10-1785). ಗಾಜು ವ್ಯಾಪಾರಿಯೊಬ್ಬನ ಒಬ್ಬನೇ ಮಗ. ಎಳಮೆಯಲ್ಲಿ ಅನೇಕ ಶಾಲೆಗಳಲ್ಲಿ ಓದಿದನಾದರೂ ಮುಂದೆ ಯಾವ ಶಾಲೆಗೂ ಸೇರದೆ ಮನೆಯಲ್ಲೇ ಓದಿ ವಿದ್ಯಾವಂತನಾದ. ಈಸ್ಟ್ ಇಂಡಿಯಾ ಕಂಪನಿ ಸೇರಿ (1819) ಮುಖ್ಯ ಪರೀಕ್ಷಕನ ಹುದ್ದೆಗೆ ಏರಿದ (1837-1856). ಚಮತ್ಕಾರದ ಸಂಭಾಷಣೆಗಳಿಂದ ವಿಶಿಷ್ಟವೆನಿಸಿದ ಈತನ ಕಾದಂಬರಿಗಳಲ್ಲಿ ಮುಖ್ಯವಾದವೂ ಇವು : ಹೆಡ್‍ಲಾಂಗ್ ಹಾಲ್ (1876), ನೈಟ್ ಮೇರ್ ಅಟ್ (1818), ಮೇಡ್ ಮೇರಿಯನ್ (1822), ಮಿಸ್ ಫಾರ್ಚೂನ್ಸ್ ಆಫ್ ಎಲ್ಫಿನ್ (1829), ಕ್ರೋಚೆಟ್ ಕ್ಯಾಸಲ್ (1831), ಗ್ರಿಲ್ ಗ್ರಾಂಜ್ (1860). ಕವಿ ಷೆಲ್ಲಿಗೆ ಹತ್ತಿರದ ಗೆಳೆಯನಾಗಿದ್ದು ಈತ ಆತನ ನೆನಪುಗಳನ್ನು ಕುರಿತಂತೆ ಫೇಸರ್ಸ್ ಮ್ಯಾಗಜೀನಿಗೆ ಕೆಲವು ಲೇಖನಗಳನ್ನು ಬರೆದ. ಈತ ಸತ್ತಿದ್ದು 1866 ರ ಜನವರಿ 23 ರಂದು.			 (ಎಚ್.ವಿ.ಎಸ್.)

ವರ್ಗ:ಮೈಸೂರು ವಿಶ್ವವಿದ್ಯಾನಿಲಯ ವಿಶ್ವಕೋಶ